ಉದಾರ ಶಿಕ್ಷಣ: ವಿದ್ಯಾರ್ಥಿಯ ಬುದ್ಧಿ ವಿಕಾಸಕ್ಕೆ ಪೋಷಕವಾಗುವ ಸಾಮಾನ್ಯ ಶಿಕ್ಷಣ (ಲಿಬರಲ್ ಎಜುಕೇಷನ್). ಗ್ರೀಕ್ ಮತ್ತು ರೋಮನರ ಅಭ್ಯುದಯದ ಕಾಲದಲ್ಲಿ ಈ ಮಾತಿಗೆ ಗುಲಾಮರಲ್ಲದ ಶ್ರೀಮಂತರ ಮತ್ತು ಆಳುವ ವರ್ಗದವರ ಶಿಕ್ಷಣವೆಂಬ ಸಂಕುಚಿತಾರ್ಥವಿತ್ತು. ಅರಿಸ್ಟಾಟಲನ ಸಿದ್ಧಾಂತದ ಪ್ರಕಾರ ವಿರಾಮಜೀವಿಗಳು ಮುಂದಿನ ತಮ್ಮ ಜೀವನದ ಸಾರ್ಥಕಕ್ಕೂ ಆತ್ಮದ ಪರಿಪೋಷಣೆಗೂ ಕೈಗೊಳ್ಳುತ್ತಿದ್ದ ಶಿಕ್ಷಣ. ಇದು ಜೀವನೋಪಾಯಕ್ಕಾಗಿ ಕೈಗೊಳ್ಳುವ, ಮನೋರಂಜನೆಗಾಗಿ ಪಡೆಯುವ ಶಿಕ್ಷಣಕ್ಕಿಂತ ಭಿನ್ನವಾದದ್ದು; ಹಿಂದೆ ಉದಾರಶಿಕ್ಷಣದಲ್ಲಿ ತರ್ಕಶಾಸ್ತ್ರ, ಭಾಷಣಕಲೆ, ವ್ಯಾಕರಣ, ಗಣಿತ, ಜ್ಯಾಮಿತಿ, ಖಗೋಳಶಾಸ್ತ್ರ, ಸಂಗೀತ ಎಂಬ ಏಳು ವಿಷಯಗಳಿದ್ದುವು. ಗುಮಾಸ್ತರು ಮತ್ತು ಜನಸಾಮಾನ್ಯರು ಪಡೆಯುತ್ತಿದ್ದ ವಿಶ್ವವಿದ್ಯಾನಿಲಯದ ಉದಾರಶಿಕ್ಷಣ ವ್ಯವಸ್ಥೆಯಲ್ಲಿ ಅರಿಸ್ಟಾಟಲನ ಗ್ರಂಥಗಳಿಗೆ ಹೆಚ್ಚಿನ ಪ್ರಾಧಾನ್ಯವಿತ್ತು. ಇವು ಮನಶಕ್ತಿಗಳನ್ನು ಪೋಷಿಸಬಲ್ಲ ವಿಷಯಗಳೆಂದು ಪರಿಗಣಿತವಾಗಿ ಮಧ್ಯಯುಗಗಳಲ್ಲಿ ಶಾಲಾ ಕಾಲೇಜುಗಳ ಅಧ್ಯಯನ ವಿಷಯಗಳಾದುವು. ಅನಂತರದ ಕಾಲದಲ್ಲಿ ಚರ್ಚಿನ ಪ್ರಾಮುಖ್ಯ ಕಡಿಮೆಯಾಗಿ ವಿಜ್ಞಾನ ಬೆಳೆದು ಜಾತ್ಯತೀತ ಭಾವನೆಗಳು ಬೆಳೆದಂತೆಲ್ಲ ಉದಾರ ಶಿಕ್ಷಣದ ವ್ಯಾಪ್ತಿ ಮಾನವಾಸಕ್ತಿಯ ಅಭ್ಯಾಸಗಳಿಗೇ ಸೀಮಿತವಾಯಿತು. ಈಗಲೂ ಶುದ್ಧ ಗಣಿತ ಮತ್ತು ವಿಜ್ಞಾನವಿಷಯಗಳ ಅಭ್ಯಾಸದಿಂದ, ಜೀವನೋಪಾಯಕ್ಕಾಗಿ ಕಲಿಯುವ ವಿದ್ಯೆಯಿಂದ ಉದಾರ ಶಿಕ್ಷಣ ಭಿನ್ನವಾದದ್ದೆಂದು ಅನೇಕ ಶಿಕ್ಷಣತಜ್ಞರು ಅಭಿಪ್ರಾಯಪಡುತ್ತಾರೆ.

ಆಧುನಿಕ ಕಾಲದಲ್ಲಿ ಉದಾರ ಶಿಕ್ಷಣಕ್ಕೆ ವಿಶಾಲ ಅರ್ಥ ಮೂಡಿಕೊಂಡಿದೆ: ವಿದ್ಯಾರ್ಥಿಯ ಮನೋವೈಶಾಲ್ಯವನ್ನು ಬೆಳೆಯಿಸಿ, ಕಲಿತ ಮುಖ್ಯವಾದ ವಿಷಯಗಳಲ್ಲಿ ಕೆಲವನ್ನು ಮುಂದುವರಿಸಿ ಉನ್ನತ ಪರಿಣತಿಯನ್ನು ಸಾಧಿಸಲು ನೆರವಾಗಬಲ್ಲ ಎಲ್ಲ ವಿಷಯಗಳೂ ಉದಾರಶಿಕ್ಷಣದ ಮಿತಿಯಲ್ಲಿ ಬರುತ್ತವೆ (ಜಾನ್ ಡ್ಯೂಯಿ). ಎಂದರೆ ಅದು ಜೀವನೋಪಾಯ ಕ್ಕಾಗಿ ವಿಶಿಷ್ಟವೂ ಕಿರಿದೂ ಆದ ಕ್ಷೇತ್ರದಲ್ಲಿ ಸಾಧಿಸುವ ಶಿಕ್ಷಣಕ್ಕೆ ಭಿನ್ನವೆನಿಸಿದ್ದು ವಿಶಾಲವೂ ಸಾಮಾನ್ಯವೂ ಆದ ವಿಷಯಗಳ ಶಿಕ್ಷಣವೆನಿಸಿದೆ. ಒಂದು ದೃಷ್ಟಿಯಲ್ಲಿ ಅದು ಮುಂದಿನ ಜೀವನಕ್ಕೆ ಸಿದ್ಧತೆಯ ರೂಪದಲ್ಲಿರುವುದಾದರೂ ಜೀವನೋಪಾಯಕ್ಕಾಗಿ ಕೈಗೊಳ್ಳುವ ವೃತ್ತಿಶಿಕ್ಷಣಕ್ಕಿಂತ ಬೇರೆಯಾದದ್ದು. ವಿಶ್ವವಿದ್ಯಾನಿಲಯ ಪೂರ್ವದ ಸಾಮಾನ್ಯ ಶಿಕ್ಷಣ ಉದಾರ ಶಿಕ್ಷಣವೇ ಆಗಿದೆ.

ಸ್ನಾತಕಪೂರ್ವ ಕಾಲೇಜು ಶಿಕ್ಷಣವನ್ನೂ ಉದಾರವೆಂದು ಕರೆಯುವ ವಾಡಿಕೆ ಇದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕೆಲವು ವಿಶಿಷ್ಟ ವಿಷಯಗಳನ್ನು ಅಭ್ಯಸಿಸಿದರೂ ಆಗ ದೊರೆತ ಮಾನಸಿಕ ತರಬೇತಿಯ ಫಲವಾಗಿ ಅವರು ಸ್ವತಂತ್ರ್ಯವಾದ (ಉದಾರ) ವಿಚಾರ ಶಕ್ತಿಯನ್ನು ಬೆಳೆಸಿಕೊಂಡು ತಮ್ಮ ಆಂತರಿಕ ಶಕ್ತಿ ಹಾಗೂ ಒಲವುಗಳನ್ನರಿತು ಭಾವೀ ಜೀವನದಲ್ಲಿ ಅವುಗಳ ಸದ್ವಿನಿಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತದೆಂದೂ ಸಮಾಜದ ಆರೋಗ್ಯಕ್ಕೆ ಇಂಥ ಉದಾರಶಿಕ್ಷಣ ಅವಶ್ಯವೆಂದೂ ವಾದಿಸಲಾಗುತ್ತಿದೆ.				(ಎನ್.ಆರ್.ಎಚ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ